ಇಟ್ರಸ್ಕನ್ ಸಂಸ್ಕøತಿ-
ರೋಮ್ ಸಂಸ್ಕøತಿಗಿಂತ ಮೊದಲು ಇಟಲಿಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂಸ್ಕøತಿ. ಇಟ್ರಸ್ಕನರ ರಾಜ್ಯಕ್ಕೆ ಇಟ್ರೂರಿಯವೆಂದು ಹೆಸರು. ಈ ಜನ ಸುಮಾರು ಕ್ರಿ.ಪೂ. 800ರಲ್ಲಿ ಏಷ್ಯ ಮೈನರ್ ಪ್ರದೇಶದಿಂದ ಬಹುತೇಕ ಲಿಡಿಯದಿಂದ ಇಟಲಿಯ ಖನಿಜ ಸಂಪತ್ತಿನಿಂದ ಆಕರ್ಷಿತರಾಗಿ ಬಂದವರು-ಎಂದು ಹಿರಡಟಸ್ ಹೇಳಿರುವ ಅಭಿಪ್ರಾಯವನ್ನು ಈಚಿನ ಸಂಶೋಧಕರು ಒಪ್ಪಿದ್ದಾರೆ. ಇವರ ಭಾಷೆ ಇಂಡೋ-ಯೂರೋಪಿಯನ್ ಭಾಷೆಗಿಂತ ಭಿನ್ನವಾದದು. ಇಟಲಿಯ ಈಗಿನ ಟಸ್ಕನಿ ಪ್ರದೇಶದಲ್ಲಿ ಬಾಳಿದ ಇವರ ಪ್ರಾಚೀನ ನಗರರಾಜ್ಯಗಳು ಕ್ರಿ.ಪೂ. 600ರ ಹೊತ್ತಿಗೆ ಉನ್ನತ ನಾಗರಿಕತೆಯನ್ನು ಹೊಂದಿದ್ದುವು. ಇವರು ಚತುರ ನಾವಿಕರಾಗಿದ್ದರು. ಕಡಲುಗಳ್ಳತನ, ವ್ಯಾಪಾರ ಮತ್ತು ಯುದ್ಧಗಳಿಂದಾಗಿ ಉನ್ನತ ಐಶ್ವರ್ಯವನ್ನು ಸಂಪಾದಿಸಿ ದುಂದು ಮತ್ತು ವಿಲಾಸಪೂರ್ಣ ಜೀವನವನ್ನು ನಡೆಸುತ್ತಿದ್ದರು. ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತ ಸ್ಥಾನವಿತ್ತು. ಯುದ್ಧಬಂದಿಗಳ ಕೊಲೆ, ಮತ್ತು ಗ್ಲೇಡಿಯೇಟರ್ ಕಾಳಗಗಳನ್ನು ಏರ್ಪಡಿಸುವುದು ರೂಢಿಯಲ್ಲಿತ್ತು. ಮತೀಯ ಸಂಬಂಧವಾದ ಆಚಾರಗಳು, ಹೆಚ್ಚಾಗಿ ಮರಣೋತ್ತರ ಕ್ರಿಯೆಗಳಿಗೆ ಸಂಬಂಧಪಟ್ಟವಾಗಿದ್ದುವು. ಮತೀಯ ಗುರುಗಳು ಭವಿಷ್ಯ ನಿರೂಪಣೆಯಲ್ಲಿ ನಿರತರಾಗಿರುತ್ತಿದ್ದರು. ಅವರ ಇಹಜೀವನ ಎಷ್ಟು ಭೋಗಮಯವೋ ಅದಕ್ಕೆ ವ್ಯತಿರಿಕ್ತವಾಗಿ ಅವರ ಮರಣೋತ್ತರ ಜೀವನ ಭೂತಪ್ರೇತಗಳಿಂದ ಕೂಡಿದ್ದು ಭಯೋತ್ಪಾದಕವಾಗಿತ್ತು. ಕುದುರೆ ಮತ್ತು ರಥಗಳ ಬಳಕೆ ಇತ್ತು. ಕೈಗಾರಿಕೆಯನ್ನು ಅಭಿವೃದ್ಧಿಪಡಿಸಿದ್ದರು. ಲೋಹದ ಕೆಲಸದಲ್ಲಿ ಔನ್ನತ್ಯ ಸಂಪಾದಿಸಿದ್ದರು. ವಾಶ್ತುಶಿಲ್ಪ ಮತ್ತು ಯಂತ್ರೋದ್ಯೋಗಗಳಲ್ಲಿ ಪ್ರಾವೀಣ್ಯ ಪಡೆದು ವ್ಯವಸಾಯವನ್ನು ಪ್ರೋತ್ಸಾಹಿಸುತ್ತಿದ್ದರು. ಇವರು ಕಾರ್ತೇಜಿನ ಸ್ನೇಹಿತರಾಗಿದ್ದರೆಂದೂ ಕ್ರಿ.ಪೂ. 474ರಲ್ಲಿ ಇವರ ನೌಕಾಪಡೆ ಸೈರಕ್ಸೂಸ್ ರಾಷ್ಟ್ರದ ನೌಕಾಪಡೆಯಿಂದ ನಾಶಹೊಂದಿತೆಂದೂ ತಿಳಿದುಬರುತ್ತದೆ. ಕ್ರಿ.ಪೂ. 423ರಿಂದ ಮೊದಲುಗೊಂಡು ರೋಮನರ ಹಾಗೂ ಇತರ ಪಂಗಡಗಳ ದಾಳಿಯಿಂದ ಇವರ ಸಂಸ್ಕøತಿ ನಶಿಸಲಾರಂಭಿಸಿ ಕ್ರಿ.ಪೂ. 396ರಲ್ಲಿ ಇವರ ನಗರರಾಜ್ಯಗಳು ಕ್ರಮೇಣ ರೋಮನರ ಅಧೀನವಾದುವು. ಕ್ರಿ.ಪೂ. 309ರಲ್ಲಿ ನಡೆದ ವಡಿಮೋನಿಯ ಸರೋವರದ ಯುದ್ಧದಲ್ಲಿ ರೋಮನರು ಇವರನ್ನು ಸೋಲಿಸಿ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದ ಮೇಲೆ ಇವರ ಸಂಸ್ಕøತಿ ಅಧಃಪತನ ಹೊಂದಿತು.									  (ಬಿ.ಕೆ.ಜಿ.)

	ಇಟ್ರಸ್ಕನ್ ಕಲೆ : ಇಟಲಿಯಲ್ಲಿ ರೋಮನ್ ಜನಾಂಗ ಪ್ರಬಲಿಸುವುದಕ್ಕಿಂತ ಐದು ಶತಮಾನಗಳಿಗಿಂತ ಮುಂಚೆಯೇ ಇಟ್ರಸ್ಕನರ ಕಲೆ ಶ್ರೇಷ್ಠ ಹಾಗೂ 
ಚಿತ್ರ : ಮೃತನ ಆಕೃತಿಯನ್ನು ರೂಪಿಸುವ ಶವಜಾಡಿಯ ಮುಚ್ಚಳ
ಚಿತ್ರ : ಚಿನ್ನದ ಆಭರಣಗಳು
ಚಿತ್ರ : ನೌಕಾಯುದ್ಧವನ್ನು ಚಿತ್ರಿಸಿರುವ ಜಾಡಿ
ಚಿತ್ರ : ಪೌರಾಣಿಕ ದೃಶ್ಯವೊಂದನ್ನು ರೂಪಿಸುವ ವರ್ಣಚಿತ್ರ
ಚಿತ್ರ : ಇಟ್ರಸ್ಕನ್ ಶೈಲಿಯ ದ್ವಾರ
ಸತ್ತ್ವಪೂರ್ಣವಾಗಿದ್ದು ಪರಿಪೂರ್ಣತೆಯನ್ನು ಪಡೆದಿತ್ತು. ಅನಂತರ ಬಂದ ರೋಮನ್ ಸಂಸ್ಕøತಿಗೂ ಕಲೆಗೂ ಇದು ಪ್ರಚೋದಕವಾಯಿತು.
	ನೆಲದಡಿಯಲ್ಲಿರುವ ಇದರ ಶವಾಗಾರಗಳಲ್ಲಿ ಇವರ ನಾಗರಿಕತೆಯನ್ನು ಪ್ರತಿಬಿಂಬಿಸುವ ಸುಂದರ ವರ್ಣಚಿತ್ರಗಳು, ಮನೆಗಳ ಆಕಾರದ ಚಿತಾಭಸ್ಮ ಪೆಟ್ಟಿಗೆಗಳು, ಚಿತ್ತಾರದ ಕೆಲಸವಿರುವ ಕಂಚಿನ ಕಲಶಪಾತ್ರೆಗಳು, ಕಂಚಿನ ರಥ, ಯುದ್ಧ ಕವಚಗಳು, ಯೋಧರ, ದೇವತೆಗಳ, ಭವಿಷ್ಯವಾದಿಗಳು, ಚಿಕ್ಕ ಪ್ರತಿಮೆಗಳು, ಮಣ್ಣಿನ ಪ್ರತಿಮೆಗಳ, ಚಿತ್ರಗಳಿಂದ ಅಲಂಕರಣಗೊಂಡ ಮಣ್ಣಿನ ಕಲಶ ಪಾತ್ರೆಗಳು, ಚಂದ್ರಕಾಂತಶಿಲೆ, ಬೆಳ್ಳಿ ಮತ್ತು ಕಂಚಿನ ಪಾತ್ರೆಗಳು, ನಾಜೂಕು ಕೆತ್ತನೆ ಕೆಲಸದ ಚಿನ್ನದ ಒಡವೆಗಳು, ಮುಖ ಕನ್ನಡಿಗಳು, ಪಾತ್ರ ಬಟ್ಟಲುಗಳು ಸಿಕ್ಕಿವೆ. ಚಿತ್ರಗಳಲ್ಲಿ ಹೆಂಗಸರನ್ನು ಗಂಡಸರಿಗಿಂತ ಬಿಳುಪಾಗಿಯೂ ಎಲ್ಲರನ್ನೂ ಪಾಶ್ರ್ವಮುಖವಾಗಿಯೂ ಚಿತ್ರಿಸಲಾಗಿದೆ. ತಮಗೆ ಪ್ರಿಯವಾದ ಔತಣ, ಭೋಜನಗಳಲ್ಲಿ, ಆಟೋಟ ಸ್ಫರ್ಧೆಗಳಲ್ಲಿ, ಕುದುರೆಯ ಓಟ, ಮೂರು ಕುದುರೆಗಳನ್ನು ಹೂಡಿದ ರಥಗಳ ಓಟ ಮೊದಲಾದವಲ್ಲಿ ಜನ ನಿರತರಾಗಿರುವಂತೆಯೂ ವಿವಿಧ ವಾದ್ಯಗಳನ್ನು ಹಿಡಿದ ಸಂಗೀತಗಾರರಿಂದಲೂ ತಟ್ಟೆ ಬಟ್ಟಲುಗಳನ್ನು ತರುತ್ತಿರುವ ದಾಸ ದಾಸಿಯರಿಂದಲೂ ಆವೃತವಾಗಿರುವಂತೆಯೂ ಇಲ್ಲಿನ ಅನೇಕ ಚಿತ್ರಗಳಲ್ಲಿ ತೋರಿಸಲಾಗಿದೆ. ಟಾರ್‍ಕ್ವಿನಿಯದ ಚಿರತೆಗಳ, ಶವಾಗಾರದ, ಔತಣದ, ಓಟದ, ಮಲ್ಲಯುದ್ಧದ ಚಿತ್ರಗಳು, ಕಂಚಿನ ಎರಕದಲ್ಲಿ ನೇಗಿಲಿಗೆ ಎತ್ತುಗಳನ್ನು ಹೂಡಿದ ರೈತ (ಕ್ರಿ.ಪೂ. 4ನೆಯ ಶತಮಾನ); ಈಟಿಯನ್ನು ಹಿಡಿದು ನಿಂತಿರುವ ಯೋಧ (ಕ್ರಿ.ಪೂ. 5ನೆಯ ಶತಮಾನ); ಪೆರೂಗಿಯದಲ್ಲಿ ಸಿಕ್ಕಿದ ಮುಳುಗುಗಾರ ಚಿತ್ತಾರದ ಕೆಲಸವಿರುವ ಕಂಚಿನ ರಥ, ಭವಿಷ್ಯವಾದಿಗಳ ಪ್ರತಿಮೆಗಳು, ಮಣ್ಣಿನಲ್ಲಿ ಚಿತ್ರಿಸಿರುವ ಯೋಧನ ತಲೆ, ಭರಣಿಗಳ ಮುಚ್ಚಳಗಳ ಮೇಲೆ ಚಿತ್ರಿಸಿರುವ ದಂಪತಿಗಳ ಕೆತ್ತನೆಗಳು; ಬಣ್ಣ ಬಳಿಯಲ್ಪಟ್ಟ ಮಣ್ಣಿನ ಅಪೊಲೊ ಪ್ರತಿಮೆಗಳು; ಸೂಕ್ಷ್ಮವಾದ ಕೆತ್ತನೆಯ, ವಿಚಿತ್ರ ಮೃಗಗಳ ಚಿತ್ರವುಳ್ಳ ಚಿನ್ನದ ಒಡವೆಗಳು- ಇವೇ ಮೊದಲಾದವು ಅವರ ಕಲೆಯ ಉತ್ತಮ ನಿದರ್ಶನಗಳಾಗಿವೆ. ಪಿಟುಲೋನಿಯದ ಮಂಡುಗೋರಿಯಲ್ಲಿ ದೊರೆತ ಮಣ್ಣಿನ ಪಾತ್ರೆಗಳಲ್ಲಿ ಜ್ಯಾಮಿತೀಯ ಆಕೃತಿಗಳಿದ್ದು 46 ಅಕ್ಷರಗಳನ್ನು ಬಿಡಿಸಲಾಗಿದೆ. ಚಿತ್ರಗಾರಿಕೆಯುಳ್ಳ ಮಣ್ಣಿನ ಕಲಶಗಳಲ್ಲಿ ಗ್ರೀಕ್ ಪ್ರಭಾವ ಕಂಡುಬರುತ್ತದೆ.		 
(ಎಂ.ಎಂ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ